ಸಾಹಿತ್ಯ
ಕನ್ನಡ ಕಾವ್ಯ ಮತ್ತು ಸಂಸ್ಕೃತ ಛಂದಸ್ಸು

ಕನ್ನಡ ಕಾವ್ಯ ಮತ್ತು ಸಂಸ್ಕೃತ ಛಂದಸ್ಸುಗಳ ನಡುವೆ ಇರುವ ಸಂಬಂಧವು, ಇತಿಹಾಸದ ಬೇರೆ ಬೇರೆ ಹಂತಗಳಲ್ಲಿ, ಆ ಎರಡು ಭಾಷೆಗಳ ನಡುವೆ ಇದ್ದಂತಹ ಸಂಬಂಧಗಳ ಪ್ರತಿಫಲನವಾಗಿದೆ. ಪ್ರತಿಯೊಂದು ಭಾಷೆಗೂ ಕೆಲವು ನಿರ್ದಿಷ್ಟವಾದ ಲಕ್ಷಣಗಳಿರುತ್ತವೆ. ಆ ಲಕ್ಷಣಗಳು ಕೆಲವು ಬಗೆಯ ಛಂದೋವಿನ್ಯಾಸಗಳಿಗೆ ಹೊಂದಿಕೊಂಡರೆ, ಬೇರೆ ಕೆಲವನ್ನು ನಿರಾಕರಿಸುತ್ತವೆ. ಉದಾಹರಣೆಗೆ, ದ್ರಾವಿಡ ಭಾಷೆಗಳ ಪದಗಳಲ್ಲಿ ಸಾಮಾನ್ಯವಾಗಿ ಎರಡು ಅಥವಾ ಮೂರಕ್ಕಿಂತ ಹೆಚ್ಚು ಉಚ್ಚಾರಾಂಶಗಳಿರುವುದಿಲ್ಲ. ಈ ಸಂಗತಿಯು ಆ ಭಾಷೆಗಳ ಛಂದಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿಯಲ್ಲಿ, ಬಹಳ ದೀರ್ಘವಾದ ಸಮಾಸ ಪದಗಳು ಕನ್ನಡದ ಜಾಯಮಾನಕ್ಕೆ ಹೊಂದಿಕೊಳ್ಳುವುದಿಲ್ಲ. ಸಂಸ್ಕೃತದಲ್ಲಿ ಅಂತಹ ಪದಗಳದೇ ರಾಜ್ಯಭಾರ. ಆದ್ದರಿಂದ, ಬೇರೆ ಭಾಷೆಗಳ ಆಕ್ರಮಣಕಾರೀ ಪ್ರಭಾವಕ್ಕೆ ಒಳಗಾಗದೆ, ತನ್ನ ಮೂಲರೂಪಗಳನ್ನು ಉಳಿಸಿಕೊಳ್ಳುವ ಯಾವುದೇ ಭಾಷೆಯು ತನಗೆ ಸಹಜವಾದ ಛಂದೋರೂಪಗಳನ್ನೂ ಕಾಪಾಡಿಕೊಳ್ಳುತ್ತದೆ. ಬದಲಾವಣೆಗಳೇನಿದ್ದರೂ, ಆ ಭಾಷೆಯ ಮೂಲನೆಲೆಗಳ ಚೌಕಟ್ಟಿನೊಳಗಡೆಯೇ ಇರುತ್ತವೆ. ಇದಕ್ಕೆ ವಿರುದ್ಧವಾಗಿ, ಬೇರೆ ಭಾಷೆಯ ಪದಗಳು ನಮ್ಮ ಭಾಷೆಯ ಸಾಂಸ್ಕೃತಿಕ ಪದಕೋಶದೊಳಗೆ ಬಹಳವಾಗಿ ಸೇರಿಕೊಂಡರೆ, ಆಗ ಛಂದಸ್ಸಿನ ಸ್ವರೂಪವೂ ಬದಲಾಗಬಹುದು.

ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡವು, ಸಂಸ್ಕೃತದ ಸಂಪರ್ಕವು ಒಂದಿನಿತೂ ಇಲ್ಲದ ಹಂತವನ್ನು ಹಾದುಬಂದಿರಬೇಕು. ಆಗ ಮೂಡಿಬಂದ ಸಾಹಿತ್ಯವು ಸಹಜವಾಗಿಯೇ ಮೌಖಿಕವಾಗಿದ್ದು, ಅದು ನಮ್ಮ ಕಾಲದವರೆಗೆ ಬಂದಿಲ್ಲ. ಆದರೆ, ಕನ್ನಡಕ್ಕೆ ಸಹಜವಾದ ಅನೇಕ ರೂಪಗಳನ್ನು ಈ ಮೌಖಿಕ ಕವಿಗಳು ಬಳಸಿರಬೇಕು. ಹಳೆಯ ಕಾಲದ ತಮಿಳು ಕಾವ್ಯವನ್ನು ನೋಡಿದಾಗ, ಈ ಮಾತಿಗೆ ಪುರಾವೆಗಳು ಸಿಗುತ್ತವೆ. ಅಂದಿನ ಕನ್ನಡವು ನಾವು ಈಗ ವಡ್ಡಾರಾಧನೆಯಲ್ಲಿ ಕಾಣುವ ಕನ್ನಡವನ್ನು ಸ್ವಲ್ಪ ಮಟ್ಟಿಗೆ ಹೋಲುತ್ತಿರಬಹುದು.

ಆದರೆ, ಕನ್ನಡವು ಬೌದ್ಧಧರ್ಮ ಮತ್ತು ಜೈನಧರ್ಮಗಳ ಪ್ರಚಾರಕರ ಸಂಪರ್ಕಕ್ಕೆ ಖಂಡಿತವಾಗಿಯೂ ಬಂತು. ರಾಜರು ಮತ್ತು ಚಕ್ರವರ್ತಿಗಳ ವಿಸ್ತರಣೆಯ ಹಂಬಲವು ಈ ಸಂಪರ್ಕವನ್ನು ಇನ್ನಷ್ಟು ಜಾಸ್ತಿಮಾಡಿತು. ಆದ್ದರಿಂದಲೇ ಸರಿಸುಮಾರು ಕ್ರಿ.ಶ. 5 ನೆಯ ಶತಮಾನಕ್ಕೆ ಸೇರಿದ, ಕನ್ನಡದ ಅತ್ಯಂತ ಹಳೆಯ ದಾಖಲೆಗಳಾದ ಶಾಸನಗಳಲ್ಲಿಯೇ, ಕನ್ನಡ ಮತ್ತು ಸಂಸ್ಕೃತಗಳ ರಚನೆ-ಶೈಲಿಗಳ ಸಂಯೋಜನೆಯಾದ ಕನ್ನಡವನ್ನು ಕಾಣಬಹುದು. ಉದಾಹರಣೆಗೆ, ಏಳನೆಯ ಶತಮಾನದ ಬಾದಾಮಿಯ ಶಾಸನವು, ಅಚ್ಚಕನ್ನಡ ಛಂದೋರೂಪವಾದ ತ್ರಿಪದಿಯನ್ನು ಬಳಸಿದರೂ ಅದರಲ್ಲಿ ಅನೇಕ ಸಂಸ್ಕೃತ ಪದಗಳಿವೆ.

ಹಳಗನ್ನಡ ಕಾವ್ಯಗಳ ಕಡೆಗೆ ಹೆಜ್ಜೆಹಾಕಿದರೆ, ಚಂಪೂ ಕಾವ್ಯಪರಂಪರೆಯಲ್ಲಿ, ಸಂಸ್ಕೃತದ ಛಂದೋರೂಪಗಳು ಹಾಸುಹೊಕ್ಕಾಗಿರುವುದನ್ನು ನೋಡುತ್ತೇವೆ. ಆದಿಪುರಾಣದಂತಹ ಸಾಹಿತ್ಯಕೃತಿಯಿರಲಿ, ಕವಿರಾಜಮಾರ್ಗದಂತಹ ಶಾಸ್ತ್ರಗ್ರಂಥವಿರಲಿ, ಈ ಮಾತು ನಿಜ. ಕನ್ನಡ ಕವಿಗಳು ಶ್ಲೋಕಗಳನ್ನು ಬಳಸುವ ವೈದಿಕ ಛಂದಸ್ಸಿನಿಂದ ಹೆಚ್ಚು ಪ್ರಭಾವಿತರಾಗಲಿಲ್ಲ. ಬದಲಾಗಿ ಅವರ ಮನಸ್ಸು ವೃತ್ತಗಳು ಮತ್ತು ಕಂದಪದ್ಯಗಳಂತಹ ಲೌಕಿಕ ಛಂದಸ್ಸಿನ ರೂಪಗಳ ಕಡೆಗೆ ಒಲಿಯಿತು. ಇಲ್ಲಿಯೂ ಅವರು ಬಹಳ ಎಚ್ಚರವಾಗಿದ್ದು, ತಮಗೆ ಇದ್ದಂತಹ ಸಾವಿರಾರು ಆಯ್ಕೆಗಳಲ್ಲಿ ಸರಿಯೆನಿಸಿದ ಕೆಲವನ್ನು ಆರಿಸಿಕೊಂಡರು. ಉದಾಹರಣೆಗೆ ಖ್ಯಾತ ಕರ್ನಾಟಕ ವೃತ್ತಗಳು ಕೇವಲ ಆರು. ಅವುಗಳಲ್ಲಿಯೂ ಸ್ರಗ್ಧರಾ ಮತ್ತು ಮಹಾಸ್ರಗ್ಧರಾ ವೃತ್ತಗಳನ್ನು ಅವರು ಉಪಯೋಗಿಸಿದ್ದು ಬಹಳ ಕಡಿಮೆ. ಈ ಮಾತಿಗೆ ಒಂದೇ ಒಂದು ವಿನಾಯತಿಯೆಂದರೆ, ಕಂಪದ್ಯಗಳು. ಅವು ಮಾತ್ರಾಗಣ ಛಂದಸ್ಸನ್ನು ಅವಲಂಬಿಸಿವೆ. ಮಾತ್ರಾಗಣಗಳ ಪರಿಕಲ್ಪನೆಯನ್ನು ಕನ್ನಡ ಕವಿಗಳು ಹೊರಗಿನಿಂದ ತೆಗದುಕೊಂಡರೂ ಕೂಡ, ಅವುಗಳನ್ನು ಬಳಸಿದ್ದು ಕನ್ನಡಕ್ಕೆ ಸಹಜವಾದ ರಗಳೆ, ಷಟ್ಪದಿ ಮುಂತಾದ ಛಂದೋರೂಪಗಳಲ್ಲಿಯೇ. ಕನ್ನಡಕ್ಕೆ ಸರಿಹೊಂದದ ದಂಡಕ, ಮಾಲಾವೃತ್ತ ಮುಂತಾದ ರೂಪಗಳನ್ನು ಅವರು ಬಳಸಿದ್ದು ಬಹಳ ಅಪರೂಪ.

ಕ್ರಮೇಣ ಸಂಸ್ಕೃತ ಛಂದೋಬಂಧಗಳ ಬಳಕೆಯು ಚಂಪೂ ಕಾವ್ಯಗಳಿಗೆ ಸೀಮಿತವಾಯಿತು. ಹತ್ತನೆಯ ಶತಮಾನವಿರಲಿ, ಹದಿನೇಳನೆಯ ಶತಮಾನವಿರಲಿ, ಈ ಮಾತು ನಿಜ. ಹಳಗನ್ನಡವು ನಡುಗನ್ನಡದ ಕಡೆಗೆ ಚಲಿಸಿದಂತೆಲ್ಲ, ಸಂಸ್ಕೃತ ಛಂದೋರೂಪಗಳ ಬಳಕೆ ಕುಗ್ಗಿತು. ಕುತೂಹಲದ ಸಂಗತಿಯೆಂದರೆ, ಕವಿಗಳ ಶಬ್ದಕೋಶವು ಸಂಸ್ಕೃತಪದಗಳನ್ನು ಒಳಗೊಂಡಾಗಲೂ ಛಂದಸ್ಸು ಮಾತ್ರ ಬದಲಾಯಿತು. ಆದರೆ, ಕನ್ನಡ ಕಾವ್ಯವು ಸಂಸ್ಕೃತಪೂರ್ವದ ಅಚ್ಚಗನ್ನಡ ಛಂದೋರೂಪಗಳಿಗೆ ಹಿಂದಿರುಗಲಿಲ್ಲ. ಅಕ್ಷರಗಣ ಛಂದಸ್ಸು ಮತ್ತು ಅಂಶಗಣ ಛಂದಸ್ಸು ಎರಡೂ ಮಾತ್ರಾಗಣ ಛಂದಸ್ಸಿನ ಕಡೆಗೆ ಚಲಿಸಿದವು. ಇಪ್ಪತ್ತನೆಯ ಶತಮಾನದ ಹಿರಿಯ ಕವಿಯಾದ ಬೇಂದ್ರೆಯವರು ವೈದಿಕ ಛಂದಸ್ಸಿನಲ್ಲಿ ಪ್ರಯೋಗ ನಡೆಸಿ ಕೆಲವು ಕವಿತೆಗಳನ್ನು ಬರೆದರು. ಶಾಸ್ತ್ರೀಯ ಸಂಗೀತದ ಕಡೆ ಒಲವಿದ್ದ ಕೆಲವು ಕನ್ನಡ ಕವಿಗಳು, ಸಂಸ್ಕೃತ ಛಂದೋರೂಪಗಳನ್ನು ಬಳಸಿ ಅದರಲ್ಲಿ ಗೇಯತೆಯ ಗುಣವನ್ನು ತಂದಿದ್ದಾರೆ.

 

ಮುಖಪುಟ / ಸಾಹಿತ್ಯ